ಕೋಲ್ಕತ್ತಾ: ವಿನಯ್ ಕುಮಾರ್, ಅದ್ಭುತ ವೇಗದ ಬೌಲರ್. ಬ್ಯಾಟ್ಸ್ ಮ್ಯಾನ್ ರನ್ನು ಕ್ಷಣಮಾತ್ರದಲ್ಲಿ ಪೆವಿಲಿಯನ್ ಗೆ ಕಳುಹಿಸುವ ಚಾಣಾಕ್ಷ ಬೌಲರ್. ಹೌದು, ಇದೇ ವಿನಯ್ ಕುಮಾರ್ ಇದೀಗ ರಣಜಿ ಟ್ರೋಫಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ರಣಜಿ ಟ್ರೋಫಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎಂಬ ಕೀರ್ತಿಗೆ ಭಾಜನವಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಪುದುಚೇರಿ ತಂಡವನ್ನು ಪ್ರತಿನಿಧಿಸುತ್ತಿರುವ ವಿನಯ್ ಕುಮಾರ್ ಅವರಿಗೆ ಪಂದ್ಯದ ಬಳಿಕ ಆಟಗಾರರು 'ಗಾರ್ಡ್ ಆಫ್ ಹಾನರ್' ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. 
 
ಕರ್ನಾಟಕದ ಮಾಜಿ ಕ್ಯಾಪ್ಟನ್ ಆಗಿದ್ದರೂ ಪ್ರಸ್ತುತ ಕರ್ನಾಟಕ ಬಿಟ್ಟು ಪುದುಚೇರಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಮಿಜೋರಾಂ ವಿರುದ್ಧ 272 ರನ್ ಅಂತರದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ವಿನಯ್ ಕುಮಾರ್ ಪಂದ್ಯದಲ್ಲಿ ಒಟ್ಟು ಏಳು ವಿಕೆಟ್‌ಗಳನ್ನು ಕಬಳಿಸಿದ್ದರು.ರಣಜಿ ಟ್ರೋಫಿಯಲ್ಲಿ ವಿನಯ್ ಕುಮಾರ್ ಒಟ್ಟು 412 ವಿಕೆಟ್‌ಗಳನ್ನು ಕಿತ್ತು ದಾಖಲೆ ಬರೆದಿದ್ದಾರೆ. ಈ ಮೂಲಕ ಪಂಕಜ್ ಸಿಂಗ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಪಂಕಜ್ ಸಿಂಗ್ ಖಾತೆಯಲ್ಲಿ 409 ವಿಕೆಟ್‌ಗಳಿವೆ. ಅಂದ ಹಾಗೆ ರಣಜಿ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹರಿಯಾಣದ ಎಡಗೈ ಸ್ಪಿನ್ನರ್ ರಜಿಂಧರ್ ಗೋಯೆಲ್ (637 ವಿಕೆಟ್) ಹೊಂದಿದ್ದಾರೆ. 
 
34ರ ಹರೆಯದ ವಿನಯ್ ಕುಮಾರ್ 2004ನೇ ಇಸವಿಯಲ್ಲಿ ಕರ್ನಾಟಕ ಪರ ಡೆಬ್ಯು ಮಾಡಿದ್ದರು. ಅಲ್ಲದೆ ಕಳೆದ 15 ವರ್ಷಗಳಲ್ಲಿ ಕರ್ನಾಟಕಕ್ಕೆ ಅನೇಕ ಸ್ಮರಣೀಯ ಗೆಲುವುಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಒಟ್ಟಾರೆಯಾಗಿ 133 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 474 ವಿಕೆಟ್ ಕಬಳಿಸಿದ್ದಾರೆ. ಇನ್ನು ಟೀಮ್ ಇಂಡಿಯಾವನ್ನು 1 ಟೆಸ್ಟ್, 31 ಏಕದಿನ ಹಾಗೂ 9 ಟ್ವೆಂಟಿ-20 ಪ್ರತಿನಿಧಿಸಿದ್ದು, ಅನುಕ್ರಮವಾಗಿ 1, 38 ಹಾಗೂ 10 ವಿಕೆಟ್‌ಗಳನ್ನು ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲೂ  ಸಹ ಮಿಂಚಿದ್ದಾರೆ. ಇದೀಗ ಇತಿ ಹೆಚ್ಚು ವಿಕೆಟ್ ಪಡೆದ ಪ್ರಥಮ ಬೌಲರ್ ಆಗಿ ದಾಖಲೆ ಬರೆದಿದ್ದಾರೆ.

మరింత సమాచారం తెలుసుకోండి: